ಎಲೆನ್ಬರೊ, ಎಡ್ವರ್ಡ್ ಲಾ, ಲಾರ್ಡ್: 1790-1871. ಇಂಗ್ಲಿಷ್ ರಾಜಕಾರಣಿ. ಲಾರ್ಡ್ ಆಕ್ಲೆಂಡಿನ ಅನಂತರ ಭಾರತದ ಗವರ್ನರ್ ಜನರಲ್ ಆಗಿದ್ದ (1842-44). ಒಂದನೆಯ ಬ್ಯಾರನ್ ಎಲೆನ್ಬರೋಗೆ ಈತ ಹಿರಿಯ ಪುತ್ರ. ಈಟನಿನಲ್ಲೂ ಕೇಂಬ್ರಿಜಿನ ಸೇಂಟ್ ಜಾನ್ಸ್‌  ಕಾಲೇಜಿನಲ್ಲೂ ವಿದ್ಯಾರ್ಜನೆ ಮಾಡಿದ ಮೇಲೆ 1813ರಲ್ಲಿ ಈತ ಬ್ರಿಟನ್ನಿನ ಕಾಮನ್ಸ್‌ ಸಭಾ ಪ್ರವೇಶಮಾಡಿದ. ಈತನ ತಂದೆ ಮರಣಿಸಿದಾಗ (1818) ಇವನಿಗೆ ಲಾಡ್ರ್ಸ್‌ ಸಭಾ ಸದಸ್ಯತ್ವ ಲಭ್ಯವಾಯಿತು. ಹತ್ತು ವರ್ಷಗಳ ಅನಂತರ (1828) ಈತ ಲಾರ್ಡ್ ಪ್ರಿವಿ   ಸೀಲ್ ಆದ. 1828-30 ಅವಧಿಯಲ್ಲಿ ಈತ ಭಾರತ ನಿಯಂತ್ರಣ ಬೋರ್ಡಿನ ಅಧ್ಯಕ್ಷನಾದಾಗಿನಿಂದ ಇವನಿಗೂ ಭಾರತಕ್ಕೂ ಸಂಬಂಧ ಬೆಳೆಯಲಾರಂಭಿಸಿತೆನ್ನಬಹುದು.
ಆಗ ಭಾರತವಿನ್ನೂ ಈಸ್ಟ್‌ ಇಂಡಿಯ ಕಂಪನಿಯ ಆಡಳಿತದಲ್ಲಿತ್ತು. ಭಾರತದ ಆಡಳಿತದಲ್ಲಿ ಸರ್ಕಾರದ ಹತೋಟಿ ಹೆಚ್ಚಾಗಿರಬೇಕೆಂಬುದು ಈತನ ಅಭಿಪ್ರಾಯವಾಗಿತ್ತು. ಬ್ರಿಟನ್ನಿನಿಂದ ಅಲೆಗ್ಸಾಂಡ್ರಿಯಕ್ಕೂ ಕೆಂಪು ಸಮುದ್ರದ ಮೂಲಕವಾಗಿ ಮುಂಬೈಗೂ ಹಡಗುಸಂಚಾರ ಏರ್ಪಡಿಸಬೇಕೆಂಬುದಾಗಿ ಈತ ವಾದಿಸಿದ. ಭಾರತೀಯರ ತೆರಿಗೆಯ ಭಾರ ಇಳಿಸಿ ಅವರ ಉತ್ಪಾದನಶಕ್ತಿ ಹೆಚ್ಚಿಸಬೇಕು. ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಷ್ಟೂ ಬ್ರಿಟನ್ನಿಗೆ ಅದು ಕೈಗಾರಿಕೆಗಳಿಗೆ ಅಗತ್ಯವಾದ ಸಾಮಗ್ರಿ ಸರಬರಾಜು ಮಾಡಬಲ್ಲುದಲ್ಲದೆ ಬ್ರಿಟನ್ನಿನ ಕೈಗಾರಿಕೆಗಳಿಗೆ ಮಾರುಕಟ್ಟೆಯಾಗಿಯೂ ಪರಿಣಮಿಸುವುದು-ಎಂಬುದು ಈತನ ನಂಬಿಕೆ. ಪಾಶ್ಚಾತ್ಯಶಿಕ್ಷಣ ಪಡೆದ ಭಾರತೀಯರನ್ನು ಹೆಚ್ಚು ಹೆಚ್ಚಾಗಿ ಆಡಳಿತದಲ್ಲಿ ಸೇರಿಸಿಕೊಳ್ಳಬೇಕೆಂಬುದು ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಂಕನ ಅಭಿಪ್ರಾಯವಾಗಿತ್ತು. ಇದು ಈತನಿಗೂ ಸಮ್ಮತವಾಗಿತ್ತು.
ಮುಂದೆ ಈತನೇ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡಾಗ ತನ್ನ ಅಭಿಪ್ರಾಯಗಳನ್ನೆಲ್ಲ ಕಾರ್ಯರೂಪಕ್ಕೆ ತರಲೆತ್ನಿಸಿದ. ಈತ ಗವರ್ನರ್ ಜನರಲ್ ಆದಾಗ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರಕ್ಕೂ ಆಫ್ಘಾನಿಸ್ತಾನಕ್ಕೂ ನಡುವೆ ಯುದ್ಧ ನಡೆಯುತ್ತಿತ್ತು. ಅಲ್ಲಿಂದ ಈತ ಸೇನೆಯನ್ನು ಹಿಂದಕ್ಕೆ ಕರೆಸಿ ಅದನ್ನು ಸಿಂಧೂ ಪ್ರದೇಶಕ್ಕೆ ನುಗ್ಗಿಸಿದ. ಅಲ್ಲಿನ ಅಮೀರರಿಗೆ ಸೋಲಾಗಿ ಸಿಂಧೂ ಪ್ರಾಂತ್ಯ ಬ್ರಿಟಿಷ್ ಭಾರತದ ಭಾಗವಾಯಿತು. ಮಹಾರಾಜ ಸಿಂಧಿಯನೂ ಪರಾಜಿತನಾದ. ಗ್ವಾಲಿಯರ್ ಬ್ರಿಟಿಷ್ ಆಶ್ರಿತ ಸಂಸ್ಥಾನವಾಯಿತು.
ಲಾರ್ಡ್ ಎಲೆನ್ಬರೋನ ಛಲವೂ ಅಹಂಕಾರವೂ ಆತುರದ ಕ್ರಮಗಳೂ ಕಂಪನಿಯ ನಿರ್ದೇಶಕ ಮಂಡಳಿಗೆ ಹಿಡಿಸಲಿಲ್ಲ. ತತ್ಫಲವಾಗಿ ಈತ ಶೀಘ್ರದಲ್ಲೇ ಇಂಗ್ಲೆಂಡಿಗೆ ವಾಪಸು ಹೋಗಬೇಕಾಯಿತು. ಆದರೂ ಭಾರತದ ವ್ಯವಹಾರಗಳ ಮೇಲೆ ಈತನ ಪ್ರಭಾವ ಇದ್ದೇ ಇತ್ತು. 

1857ರ ಬಂಡಾಯದ ಅನಂತರ ಭಾರತದ ಹೊಸ ಆಡಳಿತ ವ್ಯವಸ್ಥೆಯ ಯೋಜನೆಯನ್ನು ರಚಿಸದವನೀತನೇ. ಅಯೋಧ್ಯೆಯ ವಿಷಯವಾಗಿ ಲಾರ್ಡ್ ಕ್ಯಾನಿಂಗ್ ಮಾಡಿದ್ದ ಘೋಷಣೆಯ ಬಗ್ಗೆ ಈತ ಮಾಡಿದ ಕಟು ಟೀಕೆಯಿಂದಾಗಿ ಅಸಮಾಧಾನವೇರ್ಪಟ್ಟು ರಾಜಕೀಯದಿಂದ ಈತ ಅಂತಿಮವಾಗಿ ನಿರ್ಗಮಿಸಬೇಕಾಯಿತು. ಭಾರತದ ಲೋಕಸೇವೆಗೆ ಅಭ್ಯರ್ಥಿಗಳನ್ನು ಸ್ಪರ್ಧಾಪರೀಕ್ಷೆಯ ಮೂಲಕ ಆಯ್ಕೆ ಮಾಡಬೇಕೆಂಬ ಯೋಜನೆಯನ್ನು ಈತ ವಿರೋಧಿಸಿದ್ದ. ಈತ ಪಕ್ಕಾ ಸಾಮ್ರಾಜ್ಯವಾದಿ.	(ಎಸ್.ವಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ